ಶ್ರೀನಿವಾಸಪುರ ರಾಜಕೀಯ ಸಮರ: "ರಮೇಶ್ ಕುಮಾರ್ ಸ್ಪರ್ಧಿಸುವವರೆಗೂ fc ನಾನು ಸಹ ಸ್ಪರ್ಧಿಸುತ್ತೇನೆ" - ವೆಂಕಟಶಿವಾರೆಡ್ಡಿ ಖಡಕ್ ಘೋಷಣೆ!

​ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ತಮ್ಮ ರಾಜಕೀಯ ಎದುರಾಳಿ ರಮೇಶ್ ಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ರಮೇಶ್ ಕುಮಾರ್ ಅವರು ಎಲ್ಲಿಯವರೆಗೆ ಕಣಕ್ಕಿಳಿಯುತ್ತಾರೋ, ಅಲ್ಲಿಯವರೆಗೂ ತಾವೂ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸುವ ಮೂಲಕ, ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಬದಲಾವಣೆಯ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಕೋಲಾರ ವಾರ್ತೆ

ರೋಹನ್ ಗೌಡ

5/15/20261 min read

ಶ್ರೀನಿವಾಸಪುರ ರಾಜಕೀಯ ಸಮರ: "ರಮೇಶ್ ಕುಮಾರ್ ಸ್ಪರ್ಧಿಸುವವರೆಗೂ ನಾನು ಸಹ ಸ್ಪರ್ಧಿಸುತ್ತೇನೆ"

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಅತ್ಯಂತ ಕುತೂಹಲಕಾರಿ ಕ್ಷೇತ್ರವಾದ ಶ್ರೀನಿವಾಸಪುರದಲ್ಲಿ ರಾಜಕೀಯ ಕಾವು ಏರತೊಡಗಿದೆ. ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ರಮೇಶ್ ಕುಮಾರ್ ಅವರಿಗೆ ನೇರ ಸವಾಲು ಹಾಕುವ ಮೂಲಕ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದ್ದಾರೆ.

ರಮೇಶ್ ಕುಮಾರ್ ಸ್ಪರ್ಧೆಯೇ ನನ್ನ ಸ್ಪರ್ಧೆಗೆ ಪ್ರೇರಣೆ

ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಶಾಸಕ ವೆಂಕಟಶಿವಾರೆಡ್ಡಿ, ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಬದಲಾವಣೆಯ ಕುರಿತಾದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. "ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಎಲ್ಲಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ, ಅಲ್ಲಿಯವರೆಗೂ ನಾನು ಸಹ ಕಣಕ್ಕಿಳಿಯುವುದು ನಿಶ್ಚಿತ," ಎಂದು ಹೇಳುವ ಮೂಲಕ ತಮ್ಮ ಹಠ ಮತ್ತು ರಾಜಕೀಯ ಪಟ್ಟು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯು ಶ್ರೀನಿವಾಸಪುರದಲ್ಲಿ ಜೆಡಿಎಸ್ ಟಿಕೆಟ್ ಬೇರೆಯವರಿಗೆ ಸಿಗುವುದು ಅಸಾಧ್ಯ ಎಂಬ ಸಂದೇಶವನ್ನು ನೀಡಿದೆ.

ಕೌಟುಂಬಿಕ ಹಗರಣಗಳ ನಡುವೆ ಜೆಡಿಎಸ್ ಅಸ್ತಿತ್ವದ ಹೋರಾಟ

ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಬೆಂಬಲ ವೆಂಕಟಶಿವಾರೆಡ್ಡಿ ಅವರಿಗೆ ಭದ್ರವಾಗಿದ್ದರೂ, ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅವರ ಮೇಲಿನ ಗಂಭೀರ ಆರೋಪಗಳು ಮತ್ತು ಹಗರಣಗಳು ಪಕ್ಷಕ್ಕೆ ದೊಡ್ಡ ಮುಜುಗರ ತಂದಿವೆ. ಇಂತಹ ಸಂಕಷ್ಟದ ಸಮಯದಲ್ಲಿ, ವೆಂಕಟಶಿವಾರೆಡ್ಡಿ ಅವರು ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಮುಗಿಯದ ಜಿದ್ದಾಜಿದ್ದಿ

ರಮೇಶ್ ಕುಮಾರ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ವೆಂಕಟಶಿವಾರೆಡ್ಡಿ ಅವರು ತಾವೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿರುವುದು ಕ್ಷೇತ್ರದ ಮತದಾರರಲ್ಲಿ ಕುತೂಹಲ ಮೂಡಿಸಿದೆ. ದಶಕಗಳಿಂದ ನಡೆದು ಬಂದಿರುವ ಈ ಇಬ್ಬರು ನಾಯಕರ ನಡುವಿನ ಹೋರಾಟ ಈ ಬಾರಿಯೂ ಅಬ್ಬರಿಸಲಿದೆ ಎಂಬುದು ಸ್ಪಷ್ಟವಾಗಿದೆ.

ಆದರೆ ಒಂದಂತೂ ಸ್ಪಷ್ಟ, ಈಗಾಗಲೇ ಅನ್ಯ ರಾಜ್ಯಗಳ ಚುನಾವಣಾ ವಿಷಯ ವಿಮರ್ಶೆ ಮಾಡಿದಾಗ ಎಲ್ಲೆಡೆ ಹೊಸಬರಿಗೆ ಅವಕಾಶ ಮತ್ತು ಜನರಿಗೆ ಬದಲಾವಣೆ ಬೇಕು ಎಂಬುದು ಸ್ಪಷ್ಟ ... ಇನ್ನು ಮುಂಬರುವ ದಿನಗಳು ಜನಾದೇಶ ಏನು ಎಂಬುದು ಕುತೂಹಲಕರ ಆಗಿದೆ.

ವರದಿ: ರೋಹನ್ ಗೌಡ